ಆರೋಗ್ಯದ ಮೂಲ ಜೀವದ್ರವ ನೀರು
ಆಪೋ ವೈ ಭೇಷಜಂ
ಆಪ್ ಎಂದರೆ ನೀರು; ಕೆಲವರಿಗದು ದೈವಲೀಲೆ, ಪಂಚಮಹಾಭೂತಗಳಲ್ಲೊಂದು. ಇನ್ನು ಕೆಲವರಿಗೆ ಪ್ರಕೃತಿ ಸೃಷ್ಟಿ. ಬೇರಾವ ಗ್ರಹಗಳಲ್ಲೂ ಇಲ್ಲದ ವೈಜ್ಞಾನಿಕ ವಿಸ್ಮಯ.ಎರಡು ಜಲಜನಕ ಮತ್ತು ಒಂದು ಆಮ್ಲಜನಕಗಳ ಸೇರುವಿಕೆಯಿಂದಾದ ಈ ವಸ್ತು ಕೇವಲ ಒಂದು ರಾಸಾಯನಿಕವಲ್ಲ, ಅದು ಕೋಟ್ಯಾಂತರ ಜೀವಿಗಳ ಜೀವಿತ ಕಾರಣ. ಜಗತ್ತಿನಲ್ಲಿ ಜೀವಸೃಷ್ಟಿ ಮೊಟ್ಟಮೊದಲು ನೀರಿನಲ್ಲೇ ಆರಂಭವಾಯಿತಂತೆ. ಹೇಗೆ ಭೂಗೋಳದಲ್ಲಿ ಸುಮಾರು 70 ರಿಂದ 75% ನೀರಿದೆಯೋ ನಮ್ಮ ಶರೀರದಲ್ಲೂ ಅಷ್ಟೇ ನೀರಿದೆ ಎಂಬುದು ತಿಳಿದಾಗ ಈ ಶರೀರ ಜಲಮಹಾಭೂತ ನಿರ್ಮಿತ ಎನ್ನುವ ಮಾತು ಸಾಬೀತಾಗುತ್ತದೆ.
ಆಯುರ್ವೇದ ಶಾಸ್ತ್ರದ ಪ್ರಕಾರ ತ್ರಿದೋಷಗಳಿಂದಾದ ಈ ಶರೀರದಲ್ಲಿ ಕಫ ದೋಷವನ್ನು ನಿಯಂತ್ರಿಸಲು ನೀರಿನ ಅಂಶ ಬಹಳ ಮುಖ್ಯ. ವಾತ ಮತ್ತು ಪಿತ್ತಗಳಿಂದ ದೇಹ ಕೃಶವಾಗದಂತೆ ನೋಡಿಕೊಳ್ಳಲು, ತೇವಾಂಶ ಭರಿತವಾಗಿರಲು ಕಫ ದೋಷ ಮತ್ತು ಅದರಲ್ಲಿನ ನೀರಿನ ಅಂಶ ಅತಿ ಅವಶ್ಯ. ವೈಜ್ಞಾನಿಕವಾಗಿ ವಿವರಿಸುವುದಾದರೆ ನಾವು ಸೇವಿಸುವ ನೀರು ಜೀರ್ಣಾಂಗವ್ಯೂಹದಲ್ಲಿ ಆಹಾರದ ಚಲನೆಗೆ, ಜೀರ್ಣಕ್ರಿಯೆಗೆ ಅತಿಯಾದ ಆಮ್ಲೀಯತೆಯನ್ನು ತಗ್ಗಿಸಲು, ಪೋಷಕಾಂಶಗಳ ಹೀರಿಕೆಗೆ ಉಪಯೋಗವಾಗುತ್ತದೆ.
ಮೂತ್ರ ಮತ್ತು ಬೆವರಿನ ಮೂಲಕ ದೇಹದಲ್ಲಿ ಉತ್ಪತ್ತಿಯಾಗುವ ಮತ್ತು ಹೊರಗಿಂದ ಸೇರಿಕೊಳ್ಳುವ ಎಲ್ಲಾ ವಿಷ ವಸ್ತುಗಳನ್ನು ಹೊರಹಾಕಿ ಶರೀರ ಶುದ್ಧಿ ಮಾಡಲು ಮತ್ತು ಉಷ್ಣಾಂಶವನ್ನು ಕಡಿಮೆ ಮಾಡಲು ನೀರು ಬೇಕೇ ಬೇಕು. ರಕ್ತದ ಸಾಂದ್ರತೆಯನ್ನು ಕಾಯ್ದುಕೊಂಡು ಸರಾಗ ಚಲನೆಯನ್ನು ಬೆಂಬಲಿಸಿ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಜೀವಕೋಶಗಳ ಒಳಗೆ ಸೇರಿಸುವ ಕೆಲಸವೂ ಇದರದ್ದೇ. ಮೂಳೆಗಳ ಮತ್ತು ಸಂಧಿಗಳ ಆರೋಗ್ಯವನ್ನು ಕಾಪಾಡಿ ಶರೀರದ ನಿರ್ದಿಷ್ಟ ಗಾತ್ರ ಮತ್ತು ಕಾರ್ಯಚಟುವಟಿಕೆಗಳ ಕರ್ತೃ ಇದು. ಹಾರ್ಮೋನುಗಳು ಮುಂತಾದ ಎಲ್ಲ ದ್ರವಗಳ ಸ್ರವಿಸುವಿಕೆ, ಚರ್ಮ, ಕೂದಲು, ಇಂದ್ರಿಯಗಳ ಆರೋಗ್ಯವೂ ನೀರನ್ನೇ ಅವಲಂಬಿಸಿದೆ. ಆದರೆ ನೀರಿನ ಬಳಕೆಯಲ್ಲಿ ಒಂದಷ್ಟು ವೈಜ್ಞಾನಿಕ ವಿಚಾರಗಳು ಮತ್ತು ಎಚ್ಚರಿಕೆಗಳೂ ಇವೆ. ಅವುಗಳನ್ನು ಎಲ್ಲರೂ ತಿಳಿಯುವುದು ಒಳಿತು.
• ನಾವು ಎಂಥ ನೀರನ್ನು ಕುಡಿಯಬೇಕು? ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಕುಡಿಯುವ ನೀರಿನ ಆಮ್ಲಿಯತೆಯ ಪ್ರಮಾಣ ಅಥವಾ pH scale 6.5 ರಿಂದ 8.5 ರವರೆಗೆ ಇರಬೇಕು. ಸಾಮಾನ್ಯವಾಗಿ ಬಾವಿ ಮತ್ತು ನದಿ ನೀರಿನ ಆಮ್ಲಿಯತೆ ಇಷ್ಟೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಲ್ಕಲೈನ್ ವಾಟರ್ ಅಥವಾ ಕ್ಷಾರೀಯ ಜಲ ತಾತ್ಕಾಲಿಕವಾಗಿ ಅಸಿಡಿಟಿ ಅಥವಾ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಊಹಿಸಲಾಗುತ್ತಿದ್ದರೂ ಕೂಡ ಅದರ ಬಹುದಿನಗಳ ಬಳಕೆ ಚರ್ಚಾಸ್ಪದ. ಈ ಕಡಿಮೆ ತೀಕ್ಷ್ಣತೆಯುಳ್ಳ ನೀರು, ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಗಳು ಬೆಳೆಯಲು ಮತ್ತು ಪೋಷಕಾಂಶಗಳ ಹೀರಿಕೆ ಸರಿಯಾಗಿ ಆಗದಿರಲು ಕಾರಣವಾಗಬಹುದೆಂಬುದು ಅಭಿಮತ. ಹಾಗಾಗಿ ನಿಸರ್ಗದತ್ತವಾದ ನೀರನ್ನು ಅದರ ಮೂಲ ರೂಪದಲ್ಲಿಯೇ ಸೇವಿಸುವುದು ಉತ್ತಮ.
• ನಾವು ಕುಡಿಯುವ ನೀರಿನ ಉಷ್ಣತೆ ಎಷ್ಟಿರಬೇಕು? ಸಾಮಾನ್ಯವಾಗಿ ಕೊಠಡಿ ಉಷ್ಣತೆ ಅಥವಾ ರೂಮ್ ಟೆಂಪರೇಚರ್ನಲ್ಲಿರುವ ನೀರು ಎಲ್ಲರಿಗೂ ಸೂಕ್ತ. ಉಷ್ಣ ಜಲ ಅಥವಾ ಬಿಸಿಯಾದ ನೀರು ಜೀರ್ಣಶಕ್ತಿ ಕಡಿಮೆ ಇರುವವರಿಗೆ, ಸ್ಥೂಲಕಾಯವುಳ್ಳವರಿಗೆ, ಮೂತ್ರನಾಳದ ಸೋಂಕುಳ್ಳವರಿಗೆ ತುಂಬಾ ಉಪಯುಕ್ತ. ಅತಿಯಾದ ಶೀತ ಜಲ ಅಥವಾ ಫ್ರಿಡ್ಜ್ ನಲ್ಲಿ ಇಟ್ಟ ನೀರು ಮತ್ತು ಇನ್ನಿತರ ತಂಪು ಪಾನೀಯಗಳು ಅಗ್ನಿಮಾಂದ್ಯಕ್ಕೆ ಕಾರಣವಾಗಿ ಎಲ್ಲ ರೋಗಗಳ ಮೂಲವಾಗಬಹುದು. ಎಷ್ಟೇ ಉಷ್ಣ ಶರೀರವಾಗಿದ್ದರೂ ಕೂಡ ಅದನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಮಾನ್ಯ ನೀರೇ ಸಾಕು. ಶರೀರದ ಉಷ್ಣತೆಗೆ ಸಮಾನವಾಗಿರುವಂಥ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಕೂಡ ಒಳ್ಳೆಯ ಅಭ್ಯಾಸವೇ.
• ದಿನಕ್ಕೆ ಎಷ್ಟು ನೀರನ್ನು ಕುಡಿಯಬೇಕು? ನಾವು ಕುಡಿಯಬೇಕಾದ ನೀರಿನ ಪ್ರಮಾಣ ವ್ಯಕ್ತಿಯ ದೇಹ ಪ್ರಕೃತಿ, ಕೆಲಸದ ಪ್ರಮಾಣ, ಕಾಲ ಎಲ್ಲವನ್ನೂ ಅವಲಂಬಿಸಿರುತ್ತದೆ. ಉರಿ ಮತ್ತು ನೋವಿಲ್ಲದೆ ದಿನಕ್ಕೆ 6ರಿಂದ 8 ಬಾರಿ ತಿಳಿ ಹಳದಿ ಅಥವಾ ಒಣ ಹುಲ್ಲಿನ ಬಣ್ಣದಲ್ಲಿ ಮೂತ್ರ ವಿಸರ್ಜನೆಯಾಗುತ್ತಿದೆ ಹಾಗೂ ಸರಾಗ ಮಲವಿಸರ್ಜನೆಯಾಗುತ್ತಿದೆ ಎಂದಾದರೆ ನೀವು ಕುಡಿಯುತ್ತಿರುವ ನೀರಿನ ಪ್ರಮಾಣ ಸರಿಯಾಗಿದೆ ಎಂದರ್ಥ. ಸಾಮಾನ್ಯೀಕರಿಸಿ ಹೇಳುವುದಾದರೆ ಹೃದಯದ ಮತ್ತು ಮೂತ್ರಜನಕಾಂಗದ ಸಮಸ್ಯೆ ಇರುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ದಿನಕ್ಕೆ 2.5 ಇಂದ 3 ಲೀಟರ್ ನೀರನ್ನು ಕುಡಿಯುವುದು ಸಮಂಜಸ.
• ನೀರನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು? ಬೆಳಿಗ್ಗೆ ಎದ್ದು ಮುಖಪ್ರಕ್ಷಾಲನವಾದ ನಂತರ ಒಂದು ಅಥವಾ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಸರಳ ಜೀರ್ಣಕ್ರಿಯೆಗೆ ಮತ್ತು ವಿಸರ್ಜನೆಗೆ ತುಂಬಾ ಸಹಕಾರಿ. ಉಳಿದ ಸಮಯದಲ್ಲಿ ಒಂದೇ ಬಾರಿಗೆ ಬಹಳಷ್ಟು ನೀರನ್ನು ಕುಡಿಯುವುದು ಸೂಕ್ತವಲ್ಲ ಬದಲಾಗಿ ಬಾಯಾರಿಕೆಯಾದಾಗ ಸ್ವಲ್ಪ ಸ್ವಲ್ಪ ನೀರನ್ನು ಗುಟುಕರಿಸುವುದು ಆರೋಗ್ಯಕರ. ಆಹಾರ ಸೇವಿಸುವ ಸ್ವಲ್ಪ ಮೊದಲು ಮತ್ತು ಸೇವಿಸಿದ ತಕ್ಷಣ ನೀರಿನ ಸೇವನೆ ಯೋಗ್ಯವಲ್ಲ. ಇದರಿಂದ ಅಗ್ನಿಮಾಂದ್ಯ ಉಂಟಾಗಿ ಜೀರ್ಣಕ್ರಿಯೆಗೆ ಸಮಸ್ಯೆ ಆಗಬಹುದು. ಬದಲಾಗಿ ಆಹಾರದ ನಡುವೆ ಒಂದೆರಡು ಗುಟುಕು ನೀರನ್ನು ಕುಡಿಯಬಹುದಾಗಿದೆ.
• ಹೈಡ್ರೋಥೆರಪಿ ಅಥವಾ ನೀರಿನ ಚಿಕಿತ್ಸೆ : ನೀರಿನ ವೈಜ್ಞಾನಿಕ ಬಳಕೆಯಿಂದ ಸ್ವಾಸ್ಥ್ಯ ರಕ್ಷಣೆಗೆ ಮತ್ತು ರೋಗನಿರ್ವಹಣೆಗೆ ನೀಡಬಹುದಾದ ಸರಳ ಮತ್ತು ಪರಿಣಾಮಕಾರಿ ಚಿಕಿತ್ಸೆ ಈ ಹೈಡ್ರೋಥೆರಪಿ. ನೀರಿನ ಮೂಲಗುಣ ಉಷ್ಣತೆ ಮತ್ತು ಒತ್ತಡವನ್ನು ವೈಜ್ಞಾನಿಕವಾಗಿ ಬದಲಾವಣೆ ಮಾಡಿಕೊಂಡು ಕಟಿ ಸ್ನಾನ, ಸಂಪೂರ್ಣ ಮುಳುಗು ಸ್ನಾನ, ನೀರಿನ ಒಳಗಿನ ಮಸಾಜ್ ಮುಂತಾದ ಬಹುವಿಧದ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ರಸ ರಕ್ತಗಳ ಪರಿಚಲನೆ ಹಾಗೂ ಜೀವಕೋಶಗಳ ಕಾರ್ಯತತ್ಪರ್ತೆಯನ್ನು ಇದು ಕಾಪಾಡುತ್ತದೆ.
• ಸ್ನಾನವು ಕೂಡ ಒಂದು ಪ್ರಕೃತಿ ಚಿಕಿತ್ಸೆ ಎಂದೇ ಹೇಳಬಹುದು ನಾವು ಸ್ನಾನಕ್ಕೆ ಬಳಸುವ ನೀರು ಹೇಗಿರಬೇಕು ? ತಲೆ ಸ್ನಾನಕ್ಕೆ ಅತಿಯಾದ ಬಿಸಿನೀರು ಸರಿಯಲ್ಲ. ಅದು ದೃಷ್ಟಿ ಮತ್ತು ಕೂದಲಿನ ಆರೋಗ್ಯವನ್ನು ಹದಗಡಿಸಬಹುದು. ಕುತ್ತಿಗೆ ಕೆಳಭಾಗ ಅಂದರೆ ಮೈ ಕೈ ಕಾಲುಗಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಬಹುದು ಎಂದು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದ್ದರೂ ಕೂಡ ದೇಹದ ಉಷ್ಣತೆಗೆ ಸಮವಾದ ಅಥವಾ ಉಗುರು ಬೆಚ್ಚಗಿನ ನೀರನ್ನು ಸ್ನಾನ ಮಾಡುವುದು ಎಲ್ಲ ಸಂದರ್ಭಗಳಲ್ಲಿಯೂ ಅತಿ ಸೂಕ್ತ
• ನೀರು ಮತ್ತು ಮಾನಸಿಕ ಆರೋಗ್ಯ: ನೀರಿನ ಸೇವನೆ, ಸ್ಪರ್ಶ ಅಷ್ಟೇ ಏಕೆ ದರ್ಶನವೂ ಕೂಡ ಡೋಪಮೈನ್ , ಸೆರೋಟೋನಿನ್ ಮುಂತಾದ ಒಳ್ಳೆಯ ಹಾರ್ಮೋನುಗಳನ್ನು ಶರೀರದಲ್ಲಿ ಉತ್ಪತ್ತಿ ಮಾಡುತ್ತದೆ. ತನ್ಮೂಲಕ ಸಮಾನ ಮನಸ್ಥಿತಿ ನಿರ್ವಹಣೆ, ಬೌದ್ಧಿಕ ಸಾಮರ್ಥ್ಯ ವೃದ್ಧಿ, ಒತ್ತಡ ಮತ್ತು ಉದ್ವೇಗ ನಿಯಂತ್ರಣ ಸಾಧ್ಯ.
• ಒಟ್ಟಿನಲ್ಲಿ ಭೂಮಿಯ ಮೇಲೆ ಅಮೃತ ಎಂಬುದೊಂದು ಇದೆಯೆಂದಾದರೆ ಅದು ಈ ಜೀವಜಲ ನೀರು. ಹಾಗಾಗಿ ಇದರ ಬಗ್ಗೆ ಸಮರ್ಪಕ ಜ್ಞಾನವನ್ನು ಹೊಂದಿ ಆರೋಗ್ಯವಂತರಾಗೋಣ.
By
Dr Venkatesh Goankar
Ayurveda Physician,
Veda Wellness Center,
Nisarga Mane
Sirsi

Our Location 📍
Visit us at:
Veda Wellness Center, Nisarga Mane Campus, Ganesh Nagar, Baalehalli, Sirsi – 581402
Get in Touch with Us Today! 📞
Don’t miss out on the opportunity to transform your health the natural way! Reach out to us for more information or to book an appointment:
- Email: nisargamane6@gmail.com
- Phone: 9448729434, 7406853563
At Nisarga Mane, we are committed to helping you achieve a balanced and healthy lifestyle through the power of Ayurveda. Join us on this journey towards wellness and experience the difference!
Discover the magic of Ayurveda at Nisarga Mane – where nature meets healing. 🌿✨
Feel free to contact us anytime, and remember, your wellness journey starts here! 🧘♂️🧘♀️